Genesis 43

ಯೋಸೇಫನ ಅಣ್ಣಂದಿರು ಎರಡನೆ ಸಾರಿ ಐಗುಪ್ತಕ್ಕೆ ಬಂದದ್ದು

1ಆ ದೇಶದಲ್ಲಿ ಬರವು ಬಹು ಘೋರವಾಗಿತ್ತು. 2ಅವರು ಐಗುಪ್ತ ದೇಶದಿಂದ ತಂದಿದ್ದ ಧವಸಧಾನ್ಯವು ಮುಗಿದ ನಂತರ ಅವರ ತಂದೆಯು ಅವರಿಗೆ, <<ನೀವು ಪುನಃ ಹೋಗಿ ಇನ್ನೂ ಸ್ವಲ್ಪ ಧಾನ್ಯವನ್ನು ಕೊಂಡುತನ್ನಿ>> ಎಂದನು.

3ಅದಕ್ಕೆ ಯೆಹೂದನು ತನ್ನ ತಂದೆಗೆ ಹೇಳಿದ್ದೇನಂದರೆ, <<ಆ ಮನುಷ್ಯನು ನಮಗೆ <ನಿಮ್ಮ ತಮ್ಮನನ್ನು ಕರೆದುಕೊಂಡು ಬಂದ ಹೊರತು ನನ್ನ ಮುಖವನ್ನು ನೋಡಬಾರದು> ಎಂದು ಖಂಡಿತವಾಗಿ>> ಹೇಳಿದ್ದಾನೆ. 4ನೀನು ನಮ್ಮ ತಮ್ಮನನ್ನು ನಮ್ಮ ಜೊತೆಯಲ್ಲಿ ಕಳುಹಿಸಿದರೆ ನಾವು ಹೋಗಿ, ನಿನಗೆ ಧಾನ್ಯವನ್ನು ಕೊಂಡು ತರುತ್ತೇವೆ. 5ಅವನನ್ನು ನೀನು ಕಳುಹಿಸದೆ ಹೋದರೆ ನಾವು ಹೋಗುವುದಿಲ್ಲ. ಏಕೆಂದರೆ ಆ <<ಮನುಷ್ಯನು ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲದಿದ್ದರೆ ನನ್ನ ಮುಖವನ್ನು ನೋಡಬಾರದು>> ಎಂದು ಹೇಳಿದ್ದಾನೆ.

6ಅದಕ್ಕೆ ಇಸ್ರಾಯೇಲನು, <<ಇನ್ನೊಬ್ಬ ತಮ್ಮನಿದ್ದಾನೆಂದು ಆ ಮನುಷ್ಯನಿಗೆ ಹೇಳಿ, ನೀವು ಯಾಕೆ ನನಗೆ ಕೇಡು ಮಾಡಿದಿರಿ?>> ಎಂದು ಹೇಳಿದನು. 7ಅವರು, <<ನಮ್ಮ ವಿಷಯದಲ್ಲಿಯೂ ನಮ್ಮ ಮನೆಯವರ ವಿಷಯದಲ್ಲಿಯೂ ಆ ಮನುಷ್ಯನು ಸೂಕ್ಷ್ಮವಾಗಿ ವಿಚಾರಿಸಿದನು, ಮತ್ತೆ ಅವನು ನಿಮ್ಮ ತಂದೆಯು ಇನ್ನೂ ಬದುಕಿದ್ದಾನೋ? ನಿಮಗೆ ಇನ್ನೊಬ್ಬ ತಮ್ಮನಿದ್ದಾನೋ? ಎಂದು ಕೇಳಿದನು. ಆ ಪ್ರಶ್ನೆಗಳಿಗೆ ತಕ್ಕಂತೆ ನಾವು ಉತ್ತರಕೊಟ್ಟೆವು. ಅವನು ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿರಿ ಎಂದು ಹೇಳುವನೆಂದು ನಮಗೆ ಹೇಗೆ ತಿಳಿಯುವುದು>> ಎಂದರು.

8ಆಗ ಯೆಹೂದನು ತನ್ನ ತಂದೆಯಾದ ಇಸ್ರಾಯೇಲನಿಗೆ, <<ಆ ಹುಡುಗನನ್ನು ನನ್ನ ಜೊತೆಯಲ್ಲಿ ಕಳುಹಿಸಿಕೊಡು, ನಾವು ಹೋಗುವೆವು. ಆಗ ನೀನೂ, ನಾವು ಮತ್ತು ನಮ್ಮ ಮಕ್ಕಳೂ ಸಾಯದೆ ಬದುಕುವೆವು. 9ನಾನು ಅವನಿಗೋಸ್ಕರ ಹೊಣೆಯಾಗಿರುವೆನು. ಅವನ ವಿಷಯ ನನ್ನನ್ನೇ ಕೇಳಬಹುದು. ನಾನು ಅವನನ್ನು ತಿರುಗಿ ಕರೆದುಕೊಂಡು ಬಂದು ನಿನ್ನೆದುರಿನಲ್ಲಿ ನಿಲ್ಲಿಸದೆ ಹೋದರೆ ಆ ಅಪರಾಧ ಎಂದೆಂದಿಗೂ ನನ್ನ ಮೇಲೆ ಇರಲಿ. 10ನಾವು ತಡಮಾಡದೆ ಹೋಗಿದ್ದರೆ ಇಷ್ಟರೊಳಗೆ ಎರಡನೆಯ ಸಾರಿ ಹಿಂತಿರುಗಿ ಬರುತ್ತಿದ್ದೆವು>> ಎಂದು ಹೇಳಿದನು.

11ಅದಕ್ಕೆ ಅವರ ತಂದೆಯಾದ ಇಸ್ರಾಯೇಲನು ಅವರಿಗೆ, <<ಹಾಗಿದ್ದರೆ, ನೀವು ಹೀಗೆ ಮಾಡಿರಿ. ಈ ದೇಶದಲ್ಲಿ ದೊರಕುವ ಶ್ರೇಷ್ಟವಾದ ವಸ್ತುಗಳಲ್ಲಿ ಕೆಲವನ್ನು ನಿಮ್ಮ ಚೀಲದಲ್ಲಿ ಇಟ್ಟುಕೊಂಡು ಆ ಮನುಷ್ಯನಿಗೆ ಕಾಣಿಕೆಯಾಗಿ ತೆಗೆದುಕೊಂಡು ಹೋಗಿರಿ. ಸ್ವಲ್ಪ ತೈಲ, ಜೇನು, ಸುಗಂಧದ್ರವ್ಯ, ರಕ್ತಬೋಳ, ಗೋಡಂಬಿ, ಬಾದಾಮಿ ಇವುಗಳನ್ನು ತೆಗೆದುಕೊಂಡು ಹೋಗಿರಿ. 12ಇದಲ್ಲದೆ ಎರಡರಷ್ಟು ಹಣವನ್ನು ಕೈಯಲ್ಲಿ ತೆಗೆದುಕೊಂಡು ಹೋಗಿರಿ. ಅವರು ನಿಮ್ಮ ಚೀಲಗಳ ಬಾಯಲ್ಲಿ ಹಾಕಿ ಹಿಂದಕ್ಕೆ ಕಳುಹಿಸಿದ ಹಣವನ್ನೂ ತೆಗೆದುಕೊಂಡು ಹೋಗಿರಿ. ಒಂದು ವೇಳೆ ಅದು ಅವರಿಗೆ ತಿಳಿಯದೆ ಇದ್ದಿರಬಹುದು.

13ನಿಮ್ಮ ತಮ್ಮನನ್ನೂ ಕರೆದುಕೊಂಡು, ತಿರುಗಿ ಆ ಮನುಷ್ಯನ ಬಳಿಗೆ ಹೋಗಿರಿ. 14ಸರ್ವಶಕ್ತನಾದ ದೇವರು ನಿಮ್ಮ ಇನ್ನೊಬ್ಬ ಅಣ್ಣನನ್ನೂ, ಬೆನ್ಯಾಮೀನನನ್ನೂ ನಿಮ್ಮೊಂದಿಗೆ ಕಳುಹಿಸಿಕೊಡುವಂತೆ ನಿಮ್ಮ ಮೇಲೆ ಕರುಣೆ ತೋರುವಂತೆ ಮಾಡಲಿ. ನಾನಂತೂ ಮಕ್ಕಳನ್ನು ಕಳೆದುಕೊಂಡವನಾಗಿರಬೇಕು ಏಂದರೆ ಹಾಗೆಯೇ ಆಗಲಿ>> ಎಂದು ಹೇಳಿದನು.

15ಆಗ ಆ ಮನುಷ್ಯರು ಕಾಣಿಕೆಯನ್ನು ಸಿದ್ಧಮಾಡಿಕೊಂಡು, ಎರಡರಷ್ಟು ಹಣವನ್ನೂ ತೆಗೆದುಕೊಂಡು, ಬೆನ್ಯಾಮೀನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಐಗುಪ್ತ ದೇಶಕ್ಕೆ ಹೋಗಿ ಯೋಸೇಫನ ಎದುರಿನಲ್ಲಿ ನಿಂತುಕೊಂಡರು.

16ಬೆನ್ಯಾಮೀನನು ಅವರ ಸಂಗಡ ಇರುವುದನ್ನು ಯೋಸೇಫನು ಕಂಡು ತನ್ನ ಮನೆ ವಾರ್ತೆಯವನನ್ನು ಕರೆಯಿಸಿ, <<ಈ ಮನುಷ್ಯರನ್ನು ಮನೆಯೊಳಗೆ ಕರೆದುಕೊಂಡು ಹೋಗು, ಒಳ್ಳೆ ಕೊಬ್ಬಿದ ಪಶುವನ್ನು ಕೊಯ್ದು ಅಡುಗೆ ಸಿದ್ಧಮಾಡು. ಏಕೆಂದರೆ ಈ ಮನುಷ್ಯರು ಈ ಹೊತ್ತು ಮಧ್ಯಾಹ್ನ ನನ್ನ ಸಂಗಡ ಊಟ ಮಾಡುವರು>> ಎಂದು ಅಪ್ಪಣೆಕೊಟ್ಟನು. 17ಯೋಸೇಫನ ಅಪ್ಪಣೆಯ ಮೇರೆಗೆ ಮನೆವಾರ್ತೆಯವನು ಅವರನ್ನು ಯೋಸೇಫನ ಮನೆಯೊಳಗೆ ಕರೆದುಕೊಂಡು ಹೋದನು.

18ಯೋಸೇಫನ ಮನೆಗೆ ಕರೆತಂದುದರಿಂದ ಅವರು ಭಯಪಟ್ಟು, <<ಮೊದಲನೆಯ ಸಾರಿ ನಮ್ಮ ಚೀಲಗಳಲ್ಲಿ ಹಿಂದಕ್ಕೆ ತೆಗೆದುಕೊಂಡು ಹೋದ ಹಣದ ನಿಮಿತ್ತವೇ ಅವನು ನಮ್ಮನ್ನು ತನ್ನ ಮನೆಯೊಳಗೆ ಕರೆಸಿದ್ದಾನೆ . ನಮ್ಮ ಮೇಲೆ ಫಕ್ಕನೆ ಬಿದ್ದು, ನಮ್ಮನ್ನೂ, ನಮ್ಮ ಕತ್ತೆಗಳನ್ನೂ ತೆಗೆದುಕೊಂಡು ನಮ್ಮನ್ನು ದಾಸರನಾಗಿ ಮಾಡಿಕೊಳ್ಳಲು ಇಲ್ಲಿಗೆ ತಂದಿದ್ದಾನೆ>> ಎಂದುಕೊಂಡರು. 19ಆಗ ಅವರು ಯೋಸೇಫನ ಮನೆವಾರ್ತೆಯವನ ಬಳಿಗೆ ಹೋಗಿ ಮನೆಯ ಬಾಗಿಲ ಬಳಿ ನಿಂತುಕೊಂಡು ಅವನ ಸಂಗಡ ಮಾತನಾಡಿ ಅವನಿಗೆ, 20<<ಅಯ್ಯಾ, ಮೊದಲನೆಯ ಸಾರಿ ನಾವು ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವುದಕ್ಕೆ ಬಂದಿದ್ದೇವು.

21ನಾವು ಹೊರಟುಹೋದ ನಂತರ ಇಳಿದುಕೊಂಡಿದ್ದ ಸ್ಥಳದಲ್ಲಿ ನಮ್ಮ ಚೀಲಗಳನ್ನು ಬಿಚ್ಚಿ ನೋಡಿದಾಗ ಪ್ರತಿಯೊಬ್ಬನ ಹಣವು ತೂಕದಲ್ಲಿ ಏನೂ ಕಡಿಮೆಯಿಲ್ಲದೆ ನಮ್ಮ ನಮ್ಮ ಚೀಲದಲ್ಲೇ ಇತ್ತು . ಅದನ್ನು ಹಿಂತಿರುಗಿಸಲು ತಂದಿದ್ದೇವೆ. 22ದವಸವನ್ನು ಕೊಂಡುಕೊಳ್ಳುವುದಕ್ಕೆ ಹಣವನ್ನು ತಂದಿದ್ದೇವೆ. ಆ ಹಣವನ್ನು ನಮ್ಮ ಚೀಲಗಳಲ್ಲಿ ಯಾರು ಇಟ್ಟರೋ ನಮಗೆ ತಿಳಿಯದು>> ಎಂದು ಹೇಳಿದರು. 23ಅದಕ್ಕೆ ಅವನು, <<ನಿಮಗೆ ಸಮಾಧಾನವಾಗಲಿ. ನೀವೇನೂ ಭಯಪಡಬೇಡಿರಿ ನಿಮಗೂ ನಿಮ್ಮ ತಂದೆಗೂ ದೇವರಾಗಿರುವಾತನು ನಿಮ್ಮ ಚೀಲಗಳಲ್ಲಿ ಹಣವನ್ನು ಇಟ್ಟಿರಬೇಕು. ನಿಮ್ಮ ಹಣವು ನನಗೆ ಮುಟ್ಟಿತು>> ಎಂದು ಹೇಳಿದನು. ಆಗ ಅವನು ಸಿಮೆಯೋನನನ್ನು ಅವರ ಬಳಿಗೆ ಕರೆದುಕೊಂಡು ಬಂದನು.

24ಅವರೆಲ್ಲರನ್ನೂ ಯೋಸೇಫನ ಮನೆಯೊಳಗೆ ಕರೆದುಕೊಂಡು ಬಂದನು. ಕಾಲುಗಳನ್ನು ತೊಳೆಯುವುದಕ್ಕೆ ನೀರನ್ನು ಕೊಡಿಸಿ, ಅವರ ಕತ್ತೆಗಳಿಗೂ ಮೇವು ಹಾಕಿಸಿದನು. 25ತಾವು ಅಲ್ಲೇ ಊಟ ಮಾಡಬೇಕೆಂಬ ಸಂಗತಿಯನ್ನು ಅವರು ಕೇಳಿದ್ದರಿಂದ ತಾವು ತಂದಿದ್ದ ಕಾಣಿಕೆಯನ್ನು ಯೋಸೇಫನಿಗೆ ಕೊಡಲು ಸಿದ್ಧಮಾಡಿಕೊಂಡರು.

26ಯೋಸೇಫನು ಮನೆಗೆ ಬಂದಾಗ, ಅವರು ತಮ್ಮ ಕೈಯಲ್ಲಿದ್ದ ಕಾಣಿಕೆಯನ್ನು ಮನೆಯೊಳಗೆ ತಂದು, ಅವನಿಗೆ ಕೊಟ್ಟು, ಅವನ ಮುಂದೆ ಅಡ್ಡ ಬಿದ್ದರು. 27ಅವನು ಅವರ ಯೋಗಕ್ಷೇಮವನ್ನು ವಿಚಾರಿಸಿ ಅವರಿಗೆ ಹೇಳಿದ್ದೇನೆಂದರೆ, <<ನೀವು ಹೇಳಿದ, ಮುದುಕನಾಗಿರುವ ನಿಮ್ಮ ತಂದೆ ಕ್ಷೇಮವೋ? ಅವನು ಇನ್ನೂ ಬದುಕಿದ್ದಾನೋ?>> ಎಂದು ಕೇಳಿದನು.

28ಅವರು ಅದಕ್ಕೆ, <<ನಿನ್ನ ಸೇವಕನಾದ ನಮ್ಮ ತಂದೆ ಕ್ಷೇಮವಾಗಿದ್ದಾನೆ. ಅವನು ಇನ್ನೂ ಬದುಕಿದ್ದಾನೆ>> ಎಂದು ಹೇಳಿ, ತಮ್ಮ ತಲೆಗಳನ್ನು ಬಾಗಿಸಿ ಅವನಿಗೆ ಅಡ್ಡಬಿದ್ದರು. 29ಆಗ ಅವನು ಕಣ್ಣೆತ್ತಿ ತನ್ನ ಒಡಹುಟ್ಟಿದ ತಮ್ಮನಾದ ಬೆನ್ಯಾಮೀನನನ್ನು ನೋಡಿ, <<ನೀವು ಹೇಳಿದ ನಿಮ್ಮ ಕಿರಿ ತಮ್ಮನು ಇವನೋ?>> ಎಂದು ಕೇಳಿ ಅವನಿಗೆ, <<ಮಗನೇ, ದೇವರ ದಯೆ ನಿನ್ನ ಮೇಲೆ ಇರಲಿ>> ಎಂದು ಹೇಳಿದನು.

30ಯೋಸೇಫನು ಅವಸರವಾಗಿ ಎದ್ದು ತನ್ನ ಕೋಣೆಯೊಳಗೆ ಹೋದನು. ಏಕೆಂದರೆ ತನ್ನ ಕರಳು ತಮ್ಮನ ಮೇಲೆ ಮರುಗಿದ್ದರಿಂದ ಅವನು ತನ್ನ ಕೋಣೆಯೊಳಗೆ ಹೋಗಿ ಅಲ್ಲಿ ಅತ್ತನು. 31ಆ ಮೇಲೆ ಮುಖವನ್ನು ತೊಳೆದುಕೊಂಡು ಹೊರಗೆ ಬಂದು, ಮನಸ್ಸನ್ನು ಬಿಗಿ ಹಿಡಿದು, <<ಊಟಕ್ಕೆ ಬಡಿಸಿರಿ>> ಎಂದು ಅಪ್ಪಣೆ ಕೊಟ್ಟನು.

32ಪರಿಚಾರಕರು ಅವನಿಗೂ ಅವನ ಅಣ್ಣತಮ್ಮಂದಿರಿಗೂ ಅವನ ಸಂಗಡವಿದ್ದ ಐಗುಪ್ತರಿಗೂ ಬೇರೆ ಬೇರೆಯಾಗಿ ಊಟಕ್ಕೆ ಬಡಿಸಿದರು. ಏಕಂದರೆ ಐಗುಪ್ತರು ಇಬ್ರೀಯರ ಜೊತೆ ಸಹಪಂಕ್ತಿಯಲ್ಲಿ ಊಟಮಾಡುತ್ತಿರಲಿಲ್ಲ. ಅದು ಐಗುಪ್ತರಿಗೆ ಅಸಹ್ಯವಾಗಿತ್ತು. 33ಯೋಸೇಫನು ತನ್ನ ಅಣ್ಣತಮ್ಮಂದಿರನ್ನು ಹಿರಿಯವನು ಮೊದಲುಗೊಂಡು ಕಿರಿಯವನವರೆಗೂ ಅವರವರ ವಯಸ್ಸಿನ ಪ್ರಕಾರವೇ ಕುಳಿತುಕೊಳ್ಳುವಂತೆ ಮಾಡಿದ್ದರಿಂದ, ಅವರು ತಮ್ಮೊಳಗೆ ಆಶ್ಚರ್ಯಪಟ್ಟರು. ಯೋಸೇಫನು ತನ್ನ ಮುಂದಿಟ್ಟಿದ್ದ ಆಹಾರವನ್ನು ಅವರಿಗೆ ಕಳುಹಿಸಿದಾಗ, ಬೆನ್ಯಾಮೀನನಿಗೆ ಬಂದ ಭಾಗವು ಮಿಕ್ಕಾದವರ ಭಾಗಗಳಿಗಿಂತ ಐದರಷ್ಟು ಹೆಚ್ಚಾಗಿತ್ತು. ಅವರು ಪಾನಮಾಡಿ ಅವನ ಸಂಗಡ ಸಂತೋಷದಿಂದ ಇದ್ದರು.

34

Copyright information for KanULB